ಭಿನ್ನಾಗಮಸಮನ್ವಯ - 
	ಮನುಷ್ಯ ತನ್ನ ಬುದ್ಧಿಶಕ್ತಿಯಿಂದಾಗಿ ಸಹಜ ಪ್ರವೃತ್ತಿಯುಳ್ಳ ಪ್ರಾಣಿಗಳಿಂದ ಬೇರ್ಪಟ್ಟಿದ್ದಾನೆ. ಮನುಷ್ಯನ ಊಹಾಪೋಹಶಕ್ತಿ ಕೌಶಲ್ಯ ಸಂಸ್ಕøತಿ-ಇವುಗಳಿಗೆ ಬುದ್ಧಿಶಕ್ತಿಯೇ ಕಾರಣ. ಇದರಿಂದಲೇ ಆತ ತನಗಿಂತ ಬಲಿಷ್ಠವಾದ ಮೃಗಪಕ್ಷಿಗಳಿಂದಲೂ ಭೌತಿಕ ವಿಪತ್ತುಗಳಿಂದಲೂ ತನ್ನನ್ನು ಕಾಪಾಡಿಕೊಳ್ಳಲು ಸಾಧ್ಯವಾಯಿತು. ಆತನಲ್ಲಿ ಇದು ಯಾವಾಗ ಆವಿರ್ಭವಿಸಿತು ಎಂಬುದು ಖಚಿತವಾಗಿ ತಿಳಿದಿಲ್ಲ. ಮನುಷ್ಯನಲ್ಲಿ ಬುದ್ಧಿ ಬೆಳೆದು ಕ್ರಮೇಣ ಕೃಷಿ ವಾಣಿಜ್ಯ ಮೊದಲಾದವುಗಳಲ್ಲಿ ತೊಡಗಿದ. ಹಳ್ಳಿಗಳು ಹುಟ್ಟಿ ಬೆಳೆದವು. ಸಮಾಜ ವ್ಯವಸ್ಥೆ ರಾಜ್ಯಾಡಳಿತಕ್ರಮ ಇವುಗಳೊಂದಿಗೆ ತತ್ತ್ವವಿವೇಚನೆಯೂ ಬೆಳೆಯಿತು. ನಾವು ಯಾರು ? ಎಲ್ಲಿಂದ ಬಂದೆವು ? ಎಲ್ಲಿಗೆ ಹೋಗುತ್ತೇವೆ ? ಎಂಬ ಸಮಸ್ಯೆಗಳು ಮನಸ್ಸಿನಲ್ಲಿ ಮೂಡಿದುವು. ತಾತ್ತ್ವಿಕ ಸಮಸ್ಯೆಗಳೊಂದಿಗೆ ನೈತಿಕ ಪ್ರಶ್ನೆಗಳೂ ಉದಯಿಸಿದುವು. ರಾಗದ್ವೇಷಾದಿಗಳು ಮನುಷ್ಯನಿಗೆ ಸಹಜ ಗುಣಗಳು. ಆದರೆ ಸಹಜಪ್ರವೃತ್ತಿಗೆ ಸ್ವಾತಂತ್ರ್ಯ ಕೊಟ್ಟರೆ ಆತ ಅನರ್ಥಗಳಿಗೆ ಈಡಾಗುತ್ತಾನೆ, ಶಾಂತಿಗೆ ಭಂಗವುಂಟಾಗುತ್ತದೆ ಎಂದು ಭಾವಿಸಿದ. ಆದ್ದರಿಂದ ಸಹಜ ಪ್ರವೃತ್ತಿಯನ್ನು ನಿಯಂತ್ರಣದಲ್ಲಿಡಲು ತತ್ತ್ವಶಾಸ್ತ್ರ ನೀತಿಶಾಸ್ತ್ರಗಳು ಬೆಳೆದುವು.

	ತತ್ತ್ವಶಾಸ್ತ್ರಗಳು ಬೆಳೆದು ಆಗಮಗಳಾದುವು; ಅಲ್ಲಿಯೂ ಘರ್ಷಣೆಯುಂಟಾಗುವುದು ಸಹಜವೇ; ಏಕೆಂದರೆ ಗುರಿ ಒಂದೇ ಆದರೂ ದಾರಿಗಳು ಬೇರೆಬೇರೆಯಾಗುವುದರಿಂದ ವೈವಿಧ್ಯಕ್ಕೆ ಕಾರಣವಾಯಿತು. ಆದರೆ ಗುರಿಯ ಕಡೆಗೆ ದೃಷ್ಟಿಯಿದ್ದರೆ ಸಮನ್ವಯ ಸಾಧ್ಯವಾಗುತ್ತದೆ. ಒಂದಕ್ಕೊಂದು ಹೊಂದಿಕೊಂಡು ಒಂದೇ ತಾತ್ಪರ್ಯದಲ್ಲಿ ಲಕ್ಷ್ಯವನ್ನಿಟ್ಟುಕೊಂಡಿರುವುದೇ ಸಮನ್ವಯ. ಈ ದೃಷ್ಟಿಯಿಂದ ಬ್ರಹ್ಮಸೂತ್ರಗಳೂ ಭಗವದ್ಗೀತೆಯೂ ಸಮನ್ವಯಗ್ರಂಥಗಳು. ಸಮನ್ವಯ ಸಾಧಿಸಲು ಸಹಕಾರಿಯಾದ ಆ ಗುರಿ ಯಾವುದು ? ಅದು ಶಾಂತಿ. ಶಾಂತಿ ಬಯಸದೆ ಇರುವವರು ವಿರಳ. ರಾಗದ್ವೇಷಾದಿಗಳನ್ನು ಕಳೆದುಕೊಂಡಾಗ ಶಾಂತಿ ಲಭ್ಯವಾಗುತ್ತದೆ. ಇಹಪರಗಳ ವಿಷಯದಲ್ಲಿ ಉದಾರದೃಷ್ಟಿಯಿದ್ದರೆ ಮಾತ್ರ ಶಾಂತಿ ದೊರೆಯುತ್ತದೆ. ಸಕಲಾಗಮಗಳಿಗೂ ಶಾಂತಿಯೇ ಮುಖ್ಯೋದ್ದೇಶವೆಂಬುದರಲ್ಲಿ ಸಂದೇಹವಿಲ್ಲ. ಇಹಜೀವನದ ಶಾಂತಿಯ ಬಗ್ಗೆ ಯಾರೂ ಸಂದೇಹಚಿತ್ತರಾಗಿಲ್ಲ. ಅದು ಎಲ್ಲರ ಅನುಭವಕ್ಕೂ ವೇದ್ಯವಾದದ್ದು. ಪರಲೋಕದ ಶಾಂತಿ ಅವರವರ ವಿಶ್ವಾಸವನ್ನು ಅವಲಂಬಿಸಿದೆ. ಇದನ್ನೇ ನಿರ್ವಾಣ, ಮೋಕ್ಷ, ಭಗವದನುಭವ ಕೈವಲ್ಯ, ಮೊದಲಾದ ಪದಗಳಿಂದ ತಾತ್ತ್ವಿಕರು ಕರೆಯುತ್ತಾರೆ.

	ಎಲ್ಲ ಆಗಮಕಾರರೂ ತಮ್ಮ ತಮ್ಮ ಸಿದ್ಧಾಂತವೇ ಸರಿಯೆಂದು ಹೇಳುತ್ತಾರೆ. ಪರಸ್ಪರ ವಿರುದ್ಧವಾದ ಸಕಲಾಗಮಗಳ ಸಿದ್ಧಾಂತಗಳು ಹೇಗೆ ಸರಿಹೊಂದುತ್ತವೆ ಎಂಬ ಸಂಶಯ ಒದಗುವುದು ಸ್ವಾಭಾವಿಕ. ಇದಕ್ಕೆ ಪರಿಹಾರ ಮೂರು ಬಗೆಯಲ್ಲಿ ಹೇಳಿ ಸಮನ್ವಯ ಸಾಧಿಸಬಹುದು:

	1 ಶೂನ್ಯವಾದ-ವಸ್ತುಗಳ ಮತ್ತು ಅವುಗಳ ಗುಣಗಳು ನಿಜವಾಗಿ ಸತ್ಯವಲ್ಲ; ವಸ್ತುವೇ ಇಲ್ಲದಿರುವುದರಿಂದ ವಿರೋಧಕ್ಕೆ ಎಡೆಯಿಲ್ಲ.

	2 ಸಾರ್ವಾತ್ಮ್ಯವಾದ-ಒಂದು ವಸ್ತುವಿಗೆ ಒಂದೇ ಗುಣವಿದೆಯೆಂದು ಹೇಳಲಾಗುವುದಿಲ್ಲ. ಸರ್ವವಸ್ತುಗಳಿಗೂ ಸರ್ವಗುಣಗಳಿವೆ. ಆದ್ದರಿಂದ ವಿರೋಧಕ್ಕೆ ಅವಕಾಶವಿಲ್ಲ.

	3 ಏಕದೇಶವಾದ-ಪ್ರತ್ಯಕ್ಷಗೋಚರವಾದ ವಸ್ತುವಿನ ವಿಷಯದಲ್ಲಿಯೇ ಭಿನ್ನಾಭಿಪ್ರಾಯ ಉಂಟಾಗಲು ಸಾಧ್ಯವಿರುವಾಗ ಪರೋಕ್ಷವೂ ಅವ್ಯಕ್ತವೂ ಆದ ತತ್ತ್ವದ ವಿಷಯದಲ್ಲಿ ಮತಭೇದ ಉಂಟಾಗುವುದು ಆಶ್ಚರ್ಯವಲ್ಲ. ಕೆಲವು ಕುರುಡರು ಆನೆಯನ್ನು ಮುಟ್ಟಿ ಅದರ ಬಗೆಗೆ ನಾನಾ ಪ್ರಕಾರವಾಗಿ ಭಾವಿಸಿಕೊಂಡಿರುವುದೇ ಈ ವಾದಕ್ಕೆ ನಿದರ್ಶನ. ಆನೆಯ ವಿಷಯದಲ್ಲಿ ಕುರುಡರ ಅಭಿಪ್ರಾಯಗಳೆಲ್ಲವೂ ಅವರಿಗೆ ತಿಳಿದಷ್ಟು ಸರಿಯಾಗಿದ್ದರೂ ಅಸಂಪೂರ್ಣವಾಗಿವೆ, ಏಕದೇಶವಾಗಿವೆ. ಹೀಗೆಯೂ ವಿರೋಧವನ್ನು ಪರಿಹರಿಸಿ ಸಮನ್ವಯ ತರಬಹುದು.				
(ಎಸ್‍ಡಬ್ಲ್ಯೂ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ